ನಾಗವರ್ಮಾಚಾರ್ಯ:-
ಸು. ೧೦೭೧. ಚಂದ್ರಚೂಡಾಮಣಿಶತಕದ ಕರ್ತೃ. ಇದರಲ್ಲಿನ ಒಂದು ಪದ್ಯದಿಂದ ಉದಯಾದಿತ್ಯನಲ್ಲಿ ಈತ ಸಂಧಿವಿಗ್ರಹಿಯಾಗಿದ್ದಂತೆಯೂ ತನ್ನ ಅಣ್ಣ ಭಾಸ್ಕರ ಮೊದಲಾದವರಿಗೋಸ್ಕರ ಈ ಗ್ರಂಥವನ್ನು ರಚಿಸಿದಂತೆಯೂ ತಿಳಿದುಬರುತ್ತದೆ. ಶಿಕಾರಿಪುರದ 129ನೆಯ ಶಾಸನದಿಂದ (1072) ಚಾಳುಕ್ಯರಾಜನಾದ ಭುವನೈಕಮಲ್ಲನಲ್ಲಿ (1069-1070) ಶ್ರೀಮನ್ಮಹಾಪ್ರಧಾನಿ ಹಿರಿಯ ಸಂಧಿವಿಗ್ರಹಿ ಮನೆವೆರ್ಗಡೆ ದಂಡನಾಯಕ ಆದ ಉದಯದಿತ್ಯನ ಕಾಲದಲ್ಲಿ ಪ್ರಸಿದ್ಧನಾದ ಅದ್ವೈತಿಗುಣಗಳ್ಳ ನಾಗಮಾಚಾರ್ಯನೆಂಬೊಬ್ಬ ಇದ್ದಂತೆ ತಿಳಿಯುತ್ತದೆ. ಈತನೇ ಕವಿಯಾಗಿದ್ದಿರಬಹುದೆಂದು ಊಹಿಸಲಾಗಿದೆ. ಅದ್ವೈತಿ ಎಂಬುದು ಈತನ ತತ್ತ್ವಪಾಂಡಿತ್ಯ ಸೂಚಕ. ಈತ ಬಲಿಪುರದಲ್ಲಿ ದೇವಾಲಯಗಳನ್ನೂ ಮುತ್ತೂರೆಡೆಯಲ್ಲಿ ಸಿದ್ಧತೀರ್ಥವನ್ನೂ ಮಾಡಿಸಿದಂತೆ ವಿದಿತವಾಗುವುದು. ಮತ್ತೇಭವಿಕ್ರೀಡಿತ ಛಂದದಲ್ಲಿದ್ದು ವೈರಾಗ್ಯವನ್ನು ಪ್ರತಿಪಾದಿಸುವ ಈತನ ಕೃತಿಗೆ ಜ್ಞಾನಸಾರ ಎಂದೂ ಹೆಸರು. ಇದರ ಬಂಧ ಲಲಿತ, ಗಂಭೀರ. 					
			   (ಕೆ.ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ